ಪೋರ್ಟರ್, ಜೀನ್‍ಸ್ಟ್ರಾಟನ್ 
 	1868-1924. ಅಮೆರಿಕೆಯ ಕಾದಂಬರಿಕಾರ್ತಿ. ನಿಸರ್ಗ ಪ್ರೇಮಿ. ಹುಟ್ಟಿದ್ದು ಇಂಡಿಯಾನಾದ ಹೋಪ್‍ವೆಲ್ ಫಾರಮ್‍ನಲ್ಲಿ. ಮಾರ್ಕ್ ಮತ್ತು ಮೇರಿ ಸ್ಟ್ರಾಟನ್ ದಂಪತಿಗಳ ಹನ್ನೆರಡು ಮಕ್ಕಳಲ್ಲಿ ಈಕೆ ಕೊನೆಯವಳು. ತಂದೆಯ ವಿಶಾಲವಾದ ಫಾರಮ್ಮಿನ ಸುಂದರವಾದ ನೈಸರ್ಗಿಕ ಸನ್ನಿವೇಶದಲ್ಲಿ ಬೆಳೆದ ಜೀನಳಿಗೆ ಚಿಕ್ಕಂದಿನಿಂದಲೇ ಹೊರಾಂಗಣ ಜೀವನ ಪ್ರಿಯವಾಯಿತು. 1874ರಲ್ಲಿ ಈ ದೊಡ್ಡ ಕುಟುಂಬ ವಾಬಾಷ್ ನದಿಯ ತೀರಕ್ಕೆ ಹೋಗಿ ನೆಲಸಿತು. ಪ್ರಾಚೀನ ಜೌಗು ನೆಲವೊಂದರ ಅಂಚಿನಲ್ಲಿದ್ದ ಲಿಂಬರ್ ಲಾಸ್ಟ್‍ನಲ್ಲಿ ಒಂದು ಮರದ ಮನೆ ಕಟ್ಟಿ ವಾಸಿಸತೊಡಗಿದರು. ಆ ಪ್ರದೇಶ ಅನೇಕ ಬಗೆಯ ಸಸ್ಯಗಳಿಗೆ ಅನೇಕ ಮೃಗ ಪಕ್ಷಿಗಳಿಗೆ ಸುರಕ್ಷಿತ ಆವಾಸ ಸ್ಥಾನವಾಗಿತ್ತು. ನಿಸರ್ಗ ಪ್ರಿಯಳಾಗಿದ್ದ ಜೀನ್ ಕ್ಯಾಮರ ಹಿಡಿದು ಕಾಡನ್ನೆಲ್ಲ ಸುತ್ತಿದಳು. ಸಸ್ಯ ಪ್ರಾಣಿ ವಿಶೇಷಗಳ ಚಿತ್ರಗಳನ್ನು ತೆಗೆದು ಪತ್ರಿಕೆಗಳಲ್ಲಿ ನಿಸರ್ಗದ ಸಚಿತ್ರ ಲೇಖನಗಳನ್ನು ಪ್ರಕಟಿಸಿದಳು. ಹೀಗೆ ಹೆಸರಾದ ಈಕೆಯ ಮೊದಲ ಕಾದಂಬರಿಯನ್ನು ನ್ಯೂಯಾರ್ಕಿನ ಮೆಟ್ರೋಪಾಲಿಟನ್ ಮಾಸಿಕ ಧಾರಾವಾಹಿಯಾಗಿ ಪ್ರಕಟಿಸಿತು.

ಔಷಧಿ ವ್ಯಾಪಾರಿಯಾದ ಚಾಲ್ರ್ಸ್ ಡಿ ಪೋರ್ಟರ್ ಎಂಬಾತನನ್ನು ಈಕೆ 1886ರಲ್ಲಿ ಮದುವೆಯಾದಳು. ಇವರ ಮಗಳು ಜೀನೆಟ್ಟಿ ಮುಂದೆ ಮೀಹಾನ್ ಎಂಬ ತನ್ನ ವಿವಾಹಾನಂತರದ ಹೆಸರಿನಲ್ಲಿ ತನ್ನ ತಾಯಿಯ ಜೀವನ ಚರಿತ್ರೆಯನ್ನು ಲೇಡಿ ಆಫ್ ದಿ ಲಿಂಬರ್ ಲಾಸ್ಟ್ ಎಂಬ ಶಿರೋನಾಮೆಯಲ್ಲಿ ಬರೆದಳು. 1904ರಲ್ಲಿ ಈಕೆಯ ಫ್ರೇಕಲ್ಸ್ ಎಂಬ ಕಾದಂಬರಿ ಪ್ರಕಟಗೊಂಡಿತು. ಐದು ವರ್ಷಗಳ ಅನಂತರ ಎ ಗರ್ಲ್ ಆಫ್ ದಿ ಲಿಂಬರ್ ಲಾಸ್ಟ್ ಎಂಬ ಇನ್ನೊಂದು ಜನಪ್ರಿಯ ಕಾದಂಬರಿ ಹೊರಬಂದಿತು. ಎಲ್ಲರ ಅನುಭವದಲ್ಲೂ ಬರುವ ಸಾಮಾನ್ಯ ಸಂಗತಿಗಳನ್ನೇ ಜೋಡಿಸಿ, ಚತುರವಾಗಿ ರಂಜನೀಯವಾಗಿ ಕತೆ ಕಟ್ಟಿ ಹೇಳುವ ಕಲೆಯಿಂದ ಕೂಡಿದ ಈ ಕಾದಂಬರಿಗಳು ಯುವಜನರಿಗೆ ಪ್ರಿಯವಾದವು. 1922ರಲ್ಲಿ ದಿ ಫೈರ್ ಬರ್ಡ್-ಆ್ಯನ್ ಇಂಡಿಯನ್ ಡ್ರಾಮಾ ಎಂಬುದನ್ನು ಬರೆದಳು. ಇದರಿಂದ ಈಕೆಯ ಕೀರ್ತಿ ಇನ್ನೂ ಹೆಚ್ಚಿತು. ಯಥೇಚ್ಛ ಹಣವೂ ಬಂದಿತು. ಈ ಪುಸ್ತಕಗಳು ಒಂದೊಂದೂ 20 ಲಕ್ಷ ಪ್ರತಿಗಳಷ್ಟು ಮಾರಾಟವಾಗಿವೆ. 

ಈಕೆಯ ಇನ್ನೊಂದು ಪುಸ್ತಕ ಹೋಮಿಂಗ್ ವಿತ್ ದಿ ಬಡ್ರ್ಸ್. ಈ ಪುಸ್ತಕವನ್ನು ಫೇಬರ್ ಕೃತಿಗೆ ಹೋಲಿಸಲಾಗಿದೆ. ದಿ ಹಾರ್ವೇಸ್ಟರ್ (1911) ಎಂಬ ಕಾದಂಬರಿಯಲ್ಲಿ ತನ್ನ ಕೃಷಿಕ ತಂದೆಯ ವ್ಯಕ್ತಿ ಚಿತ್ರಣವನ್ನು ನೀಡಿದ್ದಾಳೆ. ವಾಬಾಷ್ ನದಿಯಲ್ಲಿ ಮುಳುಗಿ ಅಕಾಲ ಮರಣಕ್ಕೀಡಾದ ತನ್ನ ಸಹೋದರ ಲಿಯಾಂಡರ್‍ನ ಹೃದಯಸ್ಪರ್ಶಿ ಕತೆಯೇ ಲ್ಯಾಡಿ (1913) ಕಾದಂಬರಿಯ ವಸ್ತು. ದಿ ಕೀಪರ್ ಆಫ್ ದಿ ಬೇಸ್ (1924) ಈಕೆಯ ಕೊನೆಯ ಕೃತಿ. ಅದೇ ವರ್ಷ ವೆಸ್ಟ್ ಲಾಸ್ ಏಂಜಲ್ಸ್‍ನಲ್ಲಿ ಬೆಲ್‍ಏರ್ ಎಂಬ ಮನೆ, ಕ್ಯಾಟಿಲಿನಾ ದ್ವೀಪದಲ್ಲಿ ಏವಲಾನ್ ಎಂಬ ಸುಂದರವಾದ ಶಿಲಾಸೌಧ ಹೀಗೆ ಎರಡು ಮನೆ ಕಟ್ಟಿಸಿದಳು. ಆದರೆ, ಅದೇ ವರ್ಷದ ಕೊನೆಯಲ್ಲಿ ಕಾರಿನ ಅಪಘಾತಕ್ಕೆ ಸಿಕ್ಕಿ ಮರಣ ಹೊಂದಿದಳು. 

ಈಕೆಯ ಇತರ ಕೃತಿಗಳು : ದಿ ಸಾಂಗ್ ಆಫ್ ದಿ ಕಾರ್ಡಿನಲ್ (1903). ವ್ಹಾಹಾಟ್ ಆಯ್ ಡನ್ ವಿತ್ ದಿ ಬಡ್ರ್ಸ್ (1907) ಆ್ಯಟ್ ದಿ ಫುಟ್ ಆಫ್ ದಿ ರೇನ್ ಬೋ (1907); ಬಡ್ರ್ಸ್ ಆಫ್ ದಿ ಬೈಬಲ್ (1909); ಎ ಗರ್ಲ್ ಆಫ್ ದಿ ಲಿಂಬರ್ ಲಾಸ್ಟ್ (1909); ಮೌತ್ಸ್ ಆಫ್ ಲಿಂಬರ್ ಲಾಸ್ಟ್ (1912); ಮೈಕೇಲ್ ಓ ಹಾಲ್ಲೊರಾನ್ (1915); ಎ ಡಾಲರ್ ಆಫ್ ದಿ ಲ್ಯಾಂಡ್ (1918); ಹರ್ ಫಾದರ್ಸ್ ಡಾಟರ್ (1919); ದಿ ವ್ಹೈಟ್ ಫ್ಲ್ಯಾಗ್ (1923). 

ನಿಸರ್ಗ ಕುರಿತ ಈಕೆಯ ಪುಸ್ತಕಗಳು ಗಟ್ಟಿ ಸಾಹಿತ್ಯ ಎನಿಸಿವೆ.
(ಕೆ.ಬಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ